No products in the cart.
ಏಪ್ರಿಲ್ 14 – ಸಮೃದ್ಧಿಯಾಗಿ ಆರ್ಶೀವದಿಸಲ್ಪಟ್ಟವರು!
“ಈ ವಿಷಯದಲ್ಲಿ ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ, ಎಲ್ಲರಿಗೂ ಒಬ್ಬನೇ ಕರ್ತ; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ”. (ರೋಮ ೧೦:೧೨)
ನಮ್ಮ ತಂದೆಯು ಐಶ್ವರ್ಯವಂತನು ಮತ್ತು ನಾವು ಆತನ ವಿಶೇಷ ಮಕ್ಕಳು. ನಾವು ದತ್ತುಪುತ್ರ ಸ್ವೀಕಾರದ ಆತ್ಮವನ್ನು ಹೊಂದಿದ್ದೇವೆ, ಅದರ ಮೂಲಕ ನಾವು “ಅಪ್ಪಾ, ತಂದೆಯೇ” ಎಂದು ಕೂಗುತ್ತೇವೆ. ನಾವು ದೇವರ ಮಕ್ಕಳು ಎಂಬುದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ನೀಡುತ್ತಾನೆ (ರೋಮಾಪುರದವರಿಗೆ 8:15–16).
ನೀವು ವಿಶೇಷವಾದವರು. ನೀವು ರಾಜಾಧಿರಾಜನ ಮಕ್ಕಳು ಮತ್ತು ಪ್ರಭುಗಳ ಪ್ರಭುವಿನ ವಾರಸುದಾರರು. ಆದ್ದರಿಂದ, ನೀವು ಅವಮಾನದಿಂದ ತಲೆತಗ್ಗಿಸಿ ನಡೆಯುವ ಅಗತ್ಯವಿಲ್ಲ. ಯಾರೂ ನಿಮ್ಮನ್ನು ಕೀಳಾಗಿ ಕಾಣಲು ಅಥವಾ ಅಪ್ರಮುಖರೆಂದು ಪರಿಗಣಿಸಲು ಅವಕಾಶ ಕೊಡಬೇಡಿ.
ನೀವು ಪರಾತ್ಪರ ದೇವರ ಮಕ್ಕಳಾಗಿರುವುದರಿಂದ, ನಿಮ್ಮ ಜೀವನದ ಉದ್ದೇಶಗಳು, ಗುರಿಗಳು ಮತ್ತು ದೃಷ್ಟಿಕೋನಗಳು ಯಾವಾಗಲೂ ಉನ್ನತವಾಗಿಯೂ ಮತ್ತು ಉದಾತ್ತವಾಗಿಯೂ ಇರಲಿ. ನೀವು ಕರ್ತನ ಚಿತ್ತ ಮತ್ತು ಮಹಿಮೆಯುಳ್ಳ ಉದ್ದೇಶದಂತೆ ಅಸ್ತಿತ್ವಕ್ಕೆ ಬಂದಿದ್ದೀರಿ. ಆತನು ನಿಮ್ಮ ಬಗ್ಗೆ ದೊಡ್ಡ ಮತ್ತು ಅದ್ಭುತವಾದ ಯೋಜನೆಗಳನ್ನು ಹೊಂದಿದ್ದಾನೆ.
ಹೌದು, ಖಂಡಿತವಾಗಿಯೂ ಮಹಿಮೆಯುಳ್ಳ ಭವಿಷ್ಯವು ನಿಮಗಾಗಿ ಕಾಯುತ್ತಿದೆ. ನಿಮ್ಮನ್ನು ಅಪಹಾಸ್ಯ ಮಾಡುವವರಿಂದ, ಕಡೆಗಣಿಸುವವರಿಂದ ಅಥವಾ ತಿರಸ್ಕಾರದಿಂದ ನಡೆಸಿಕೊಳ್ಳುವವರಿಂದ ದೂರವಿರಿ. ನಿಜವಾದ ಉದಾತ್ತ ವ್ಯಕ್ತಿಗಳು ಯಾವಾಗಲೂ ಇತರರನ್ನು ಉದಾತ್ತರನ್ನಾಗಿಯೇ ಪರಿಗಣಿಸುತ್ತಾರೆ. ಕರ್ತನೇ ನಿಮ್ಮನ್ನು ಉನ್ನತವಾಗಿ ಗೌರವಿಸಿದ್ದಾನೆ. ಆತನ ಎಲ್ಲಾ ಸೃಷ್ಟಿಗಳಲ್ಲಿ ನೀವು ಅಮೂಲ್ಯರಾಗಿದ್ದೀರಿ.
ದೈವಭಕ್ತರೊಬ್ಬರು ಹೀಗೆ ಹೇಳಿದ್ದಾರೆ: “ಕರ್ತನು ಯಾವುದೇ ವ್ಯಕ್ತಿಯನ್ನು ಪ್ರಯೋಜನವಿಲ್ಲದವನನ್ನಾಗಿ ಅಥವಾ ಮಹತ್ವವಿಲ್ಲದವನನ್ನಾಗಿ ಸೃಷ್ಟಿಸುವುದಿಲ್ಲ. ಉದ್ದೇಶವಿಲ್ಲದ ಯಾವುದನ್ನೋ ಸೃಷ್ಟಿಸಲು ಆತನು ತನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ.” ಕರ್ತನು ನಿಮ್ಮನ್ನು ವಿಶೇಷವೆಂದು ಪರಿಗಣಿಸಿರುವುದರಿಂದ, ನಿಮ್ಮ ಹೃದಯದಲ್ಲಿ ಎಂದಿಗೂ ಕೀಳರಿಮೆಗೆ ಅವಕಾಶ ನೀಡಬೇಡಿ.
ನೀವು ಉನ್ನತವಾದ ಮತ್ತು ಆಳವಾದ ಆತ್ಮಿಕ ಜೀವನವನ್ನು ತಲುಪಲು ಬಯಸಿದರೆ, ಈ ಐದು ಹಂತಗಳನ್ನು ಅನುಸರಿಸಿರಿ:
1.ನೀವು ದೇವರ ಮಕ್ಕಳು ಮತ್ತು ಆತನ ವಾರಸುದಾರರು ಎಂಬುದನ್ನು ನೆನಪಿಡಿ.
2.ಕರ್ತನು ನಿಮಗೆ ನೀಡಿರುವ ಸಾಮರ್ಥ್ಯಗಳನ್ನು ಮತ್ತು ವರಗಳನ್ನು ಉಪಯೋಗಿಸಿರಿ.
3.ಕರ್ತನು ನಿಮ್ಮೊಳಗೆ ಇರಿಸಿರುವ ಶಕ್ತಿಯನ್ನು ಕಾರ್ಯರೂಪಕ್ಕೆ ತನ್ನರಿ..
4.ಕ್ರಿಸ್ತ ಯೇಸುವಿನಲ್ಲಿ ನಿಮ್ಮದಾಗಿರುವ ಪರಲೋಕದ ಆಶೀರ್ವಾದಗಳನ್ನು ಮತ್ತು ಐಶ್ವರ್ಯಗಳನ್ನು ಮನನ ಮಾಡಿಕೊಳ್ಳಿ.
5.ನೀವು ಬಾಧ್ಯವಾಗಿ ಪಡೆಯಲಿರುವ ಪರಲೋಕ ರಾಜ್ಯದ ಬಗ್ಗೆ ಯೋಚಿಸಿ ಸಂತೋಷಿಸಿರಿ.
ಒಂದು ಕಾಲದಲ್ಲಿ ನೀವು ಅನಾಮಧೇಯರಾಗಿದ್ದರೂ, ದೇವರು ನಿಮ್ಮನ್ನು ತನ್ನ ಸ್ವಂತ ಮಕ್ಕಳಾಗಿ ತನ್ನ ಕುಟುಂಬಕ್ಕೆ ಸೇರಿಸಿಕೊಂಡನು. ನಿಮಗೆ ಅಧಿಕಾರ ಮತ್ತು ಗುರುತನ್ನು ನೀಡಿದನು. ಆತನು ತನ್ನ ಶಕ್ತಿಯಿಂದ ನಿಮ್ಮನ್ನು ತುಂಬಿಸಿದನು. ಪ್ರತಿಯೊಂದು ಪರಲೋಕದ ಆಶೀರ್ವಾದಗಳಿಂದ ನಿಮ್ಮನ್ನು ಸಮೃದ್ಧಗೊಳಿಸಿದನು. ಮತ್ತು ಆತನು ನಿಮಗೆ ನಿತ್ಯವಾದ ರಾಜ್ಯವನ್ನು ವಾಗ್ದಾನ ಮಾಡಿದ್ದಾನೆ.
ಪ್ರಿಯ ದೇವರ ಮಕ್ಕಳೇ, ನೀವು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಕರ್ತನನ್ನು ಸ್ತುತಿಸುವಿರಾ?
ಮುಂದಿನ ಅಧ್ಯಾಯಕ್ಕಾಗಿ ದೇವರ ವಾಕ್ಯ: “ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ಚರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು.” (ಫಿಲಿ ೪:೧೯)
