No products in the cart.
ಜನವರಿ 16 – ಶುದ್ಧವಾದ ಹೃದಯ!ಶುದ್ಧವಾದ ಹೃದಯ!
“ದೇವರೇ. ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು.” (ಕೀರ್ತ ೫೧:೧೦)
ದಾವೀದನು ತಾನು ಮಾಡಿದ ಪಾಪದ ಗಂಭೀರತೆಯನ್ನು ಅರಿತುಕೊಂಡಾಗ, ಆತನು ಪಶ್ಚಾತ್ತಾಪದಿಂದ ಅಳುತ್ತಾ “ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು” ಎಂದು ದೇವರನ್ನು ಕೂಗಿದನು. ಸ್ವಲ್ಪ ನಿಶ್ಚಬ್ಧವಾಗಿದ್ದು ಆ ಪದಗಳನ್ನು ಧ್ಯಾನಿಸಿರಿ! ಶುದ್ಧವಾದ ಹೃದಯ, ಪರಿಶುದ್ಧ ಹೃದಯ – ಇದನ್ನೇ ಆತನು ಬಯಸಿದನು.
ಒಂದು ಮನೆಯು ಮುಚ್ಚಲ್ಪಟ್ಟು ಕೆಲವು ವರ್ಷಗಳು ಉಪಯೋಗಿಸದೇ ಹಾಗೆ ಬಿಟ್ಟರೆ ಸಹಜವಾಗಿ ಅಲ್ಲಿ ದೂಳು, ಕಸ ಮತ್ತು ಎಲ್ಲಾ ವಿಧವಾದ ಕೀಟಾಣುಗಳು ತುಂಬಿಕೊಂಡಿರುತ್ತವೆ. ಅಂತಹ ಮನೆಯನ್ನು ಸಂಪೂರ್ಣವಾಗಿ ಗುಡಿಸಿ, ತೊಳೆದು ಮತ್ತು ಶುಭ್ರವಾಗಿ ಶುಚಿಗೊಳಿಸಿದರೆ ಮಾತ್ರವೇ ಅದು ವಾಸಿಸಲು ಯೋಗ್ಯವಾದ ಮನೆಯಾಗಿರುತ್ತದೆ. ಅದೇ ಪ್ರಕಾರ ಮನುಷ್ಯನ ಹೃದಯವೂ ಸಹ ಅನೇಕ ವರ್ಷಗಳಿಂದ ಆತ್ಮೀಕ ಹೊಲಸು, ಪಾಪ, ಪಾಪಪ್ರಜ್ಞೆ, ವ್ಯಾಮೋಹ ಮತ್ತು ಅಹಂಕಾರದಿಂದ ತುಂಬಿದೆ. ಆದರೆ ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿ, ನಮ್ಮನ್ನು ಯೇಸು ಕ್ರಿಸ್ತನ ರಕ್ತದಿಂದ ಶುದ್ಧೀಕರಿಸಿಕೊಂಡರೆ ಮತ್ತು ನಮ್ಮನ್ನು ನೂತನ ಪಡಿಸಲು ಪವಿತ್ರಾತ್ಮನಿಗೆ ಅವಕಾಶ ನೀಡಿದರೆ ನಮ್ಮ ಆಂತರ್ಯದ ಮನೆಯು ಪುನಃ ಶುದ್ಧಿಯಾಗುತ್ತದೆ. ಆಗ ಮಾತ್ರವೇ ನಾವು ಪರಿಶುದ್ಧವಾದ ಜೀವನದೊಳಗೆ ಪ್ರವೇಶಿಸಲು ಸಾಧ್ಯವಾಗುತ್ತದೆ.
ನಾವು ಹೇಗೆ ಶುದ್ಧವಾದ ಹೃದಯವನ್ನು ಹೊಂದಿಕೊಳ್ಳುತ್ತೇವೆ?
೧. ದೇವರ ವಾಕ್ಯದ ಮೂಲಕ: ನಿಮ್ಮ ಹೃದಯ ಶುದ್ಧವಾದರೆ ಮಾತ್ರ ನಿಮ್ಮ ಜೀವನ ಶುದ್ಧವಾಗುತ್ತದೆ. ಮತ್ತು ನೀವು ನಿಮ್ಮ ಹೃದಯದಲ್ಲಿ ದೇವರ ವಾಕ್ಯಗಳನ್ನು ತುಂಬಿಸಿಕೊಳ್ಳುವದರಿಂದ ಮಾತ್ರ ಶುದ್ಧಿಯಾಗುತ್ತದೆ. “ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ. ” (ಕೀರ್ತ ೧೧೯:೯) ನೀವು ದೇವರ ವಾಕ್ಯಗಳಿಗೆ ವಿಧೇಯರಾಗಲು ಸಮರ್ಪಿಸಿದರೆ, ಪವಿತ್ರಾತ್ಮನು ನಿಮ್ಮೊಳಗೆ ಬಂದು ನಿಮ್ಮನ್ನು ಬಲಪಡಿಸಿ ಸಹಾಯಮಾಡುವನು.
೨. ಶುದ್ಧವಾದ ಕಣ್ಣುಗಳ ಮೂಲಕ: ಪರಿಶುದ್ಧವಾದ ಜೀವನಕ್ಕೆ ಪರಿಶುದ್ಧವಾದ ಕಣ್ಣುಗಳು ಅತ್ಯವಶ್ಯಕ. ಯೋಬನು ಹೀಗೆ ಹೇಳುತ್ತಾನೆ “ನನ್ನ ಕಣ್ಣುಗಳೊಂದಿಗೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ. ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” (ಯೋಬ ೩೧:೧)
ಯೇಸು ಹೇಳಿದ್ದೇನಂದರೆ ” ..ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು”. (ಮತ್ತಾ ೫:೨೮). ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಿರಿ – ನೀವು ಅವುಗಳನ್ನು ಕಾಯದಿದ್ದರೆ ಅವು ನಿಮ್ಮ ಆತ್ಮವನ್ನು ನಾಶಮಾಡುತ್ತವೆ.
೩. ಶುದ್ಧವಾದ ಹಸ್ತಗಳ ಮೂಲಕ: ಪರಿಶುದ್ಧವಾದ ಜೀವನಕ್ಕೆ ಪರಿಶುದ್ಧವಾದ ಕೈಗಳೂ ಸಹ ಅವಶ್ಯವಾಗಿದೆ. “ಅಶುದ್ಧವಾದವುಗಳನ್ನು ಮುಟ್ಟ ಬೇಡಿರಿ” (೨ ಕೊರಿ ೬:೧೭). ನಿಮ್ಮ ಹಸ್ತಗಳನ್ನು ದಿನಾಲೂ ಸ್ತುತಿಯಿಂದಲೂ ಮತ್ತು ಪರಿಶುದ್ಧತೆಯಿಂದಲೂ ಕರ್ತನ ಕಡೆಗೆ ಎತ್ತಿರಿ.
೪. ಪರಿಶುದ್ಧವಾದ ಶರೀರದ ಮೂಲಕ: ಪರಿಶುದ್ಧವಾದ ಜೀವನಕ್ಕೆ ಪರಿಶುದ್ಧವಾದ ಶರೀರ ಅವಶ್ಯವಾಗಿದೆ. “..ನೀವು ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು.” (ರೋಮ ೧೨:೧). ಶರೀರವು ಅನೈತಿಕತೆಗಾಗಿ ಕೊಡಲ್ಪಟ್ಟಿಲ್ಲ. ನಾವು ಅದನ್ನು ಪರಿಶುದ್ಧತೆಯಿಂದ ಕಾಪಾಡಿಕೊಳ್ಳಬೇಕು. “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” (೧ ಕೊರಿ ೬:೧೮). ಇತರ ದೇಹದ ಹೊರಭಾಗದ ಪಾಪಗಳಿಗಿಂತ ಜಾರತ್ವವು ನಮ್ಮ ಶರೀರವನ್ನೇ ನಾಶಮಾಡುತ್ತದೆ.
ಪ್ರಿಯ ದೇವ ಮಗುವೇ ಪಾಪವು ನಿಮ್ಮ ಮೃತ ದೇಹದ ಮೇಲೆ ಆಳ್ವಿಕೆ ಮಾಡಲು ಅವಕಾಶ ನೀಡಬೇಡಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ..ಆತನ ಮೇಲೆ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಕ್ರಿಸ್ತನು ಶುದ್ಧವಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ” (೧ ಯೋಹಾ ೩:೩)
