No products in the cart.
ಜನವರಿ 14 – ನಿಮ್ಮ ಹೃದಯವು ಸ್ಥಿರವಾಗಿರಲಿ!
“ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು” (ಕೀರ್ತ 27:14)
ಒಂದು ಮರವು ಎತ್ತರವಾಗಿ ಹಾಗೂ ಫಲಭರಿತವಾಗಿ ಬೆಳೆಯಲು ಅದರ ಬೇರುಗಳು ಭೂಮಿಯ ನೆಲದಲ್ಲಿ ಆಳವಾಗಿ ಬೇರೂರಿರಬೇಕು. ಅದೇ ಪ್ರಕಾರ ಒಬ್ಬ ವಿಶ್ವಾಸಿಯು ಸಹ ಆತ್ಮೀಕವಾಗಿ ಸ್ಥಿರವಾಗಿರಬೇಕು. ಇದಕ್ಕೆ ದೇವರೊಂದಿಗೆ ಅನ್ಯೋನ್ಯತೆ ಮತ್ತು ಪ್ರಾರ್ಥನೆ ಜೀವನ ತುಂಬಾ ಅಗತ್ಯವಾಗಿದೆ.
ಕೆಲ ವಿಶ್ವಾಸಿಗಳು ಮೂವತ್ತು ವರ್ಷಗಳಿಂದ ಕ್ರೈಸ್ತರಾಗಿದ್ದರೂ ಒಂದು ಸಣ್ಣ ಸಮಸ್ಯೆ ಅವರನ್ನು ಕದಲಿಸುತ್ತದೆ. ಅವರು ತಕ್ಷಣವೇ ನಿರುತ್ಸಾಹಕ್ಕೆ ಒಳಗಾಗುತ್ತಾರೆ ಮತ್ತು ಅವರ ಸಂಕಟದಲ್ಲಿ ಕರ್ತನನ್ನೂ ಸಹ ನಿರಾಕರಿಸುತ್ತಾರೆ. ಸಭಾಪಾಲಕರು ಮತ್ತು ದೇವರ ಸೇವಕರು ಅವರನ್ನು ನಿರಂತರವಾಗಿ ಆದರಿಸಿ, ಅವರ ವಾಗ್ದಾನಗಳನ್ನು ಬಲಪಡಿಸಿ ಅವರನ್ನು ಪುನಃ ತಮ್ಮ ನಂಬಿಕೆಗೆ ಹಿಂತಿರುಗುವಂತೆ ಮಾಡುವರು.
ಸ್ಥಿರ ಚಿತ್ತವಾದ ಹೃದಯ ಇಲ್ಲದ ಸೈನಿಕನು ಹೇಡಿಯ ಹಾಗೆ ಪಲಾಯನ ಮಾಡುವನು. ಸ್ಥಿರತೆ ಇಲ್ಲದ ವಿದ್ಯಾರ್ಥಿಯು ಸೋಲಿನ ಭಯದಲ್ಲಿ ಪರೀಕ್ಷೆಯನ್ನೂ ಸಹ ಬರೆಯುವುದಿಲ್ಲ. ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಿರವಾದ ಹೃದಯ ತುಂಬಾ ಅಗತ್ಯವಾಗಿದೆ.
ಸ್ಥಿರವಾದ ಹೃದಯ ಹೊಂದಿದವರನ್ನು ದೇವರೇ ಬಲಪಡಿಸುತ್ತಾರೆ. ಅಪೋಸ್ತಲನಾದ ಪೇತ್ರನು ವಿಶ್ವಾಸಿಗಳಿಗೆ ಹೀಗೆ ಬರೆಯುತ್ತಾನೆ ” ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯ ಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾದೆಪಟ್ಟ ಮೇಲೆ ನಿಮ್ಮನ್ನು ಯೋಗ್ಯ ಸ್ಥಿತಿಗೆ ತಂದು ನೆಲೆಗೊಳಿಸಿ ನಿಮ್ಮನ್ನು ಬಲಪಡಿಸುವನು.” (1 ಪೇತ್ರ 5:10)
ನಮ್ಮ ಶರೀರಕ್ಕೆ ಶಕ್ತಿ ನೀಡಲು ವೈದ್ಯರು ಪೌಷ್ಟಿಕ ಔಷದಿಯನ್ನು ನೀಡುತ್ತಾರೆ. ಅವರು ವ್ಯಾಯಾಮ ಮಾಡಲು ನಮಗೆ ಸೂಚಿಸುತ್ತಾರೆ. ಆದರೆ ನಮ್ಮ ಶಾರೀರಿಕ ಬಲಕ್ಕಿಂತಲೂ ಹೃದಯದ ಬಲವು ತುಂಬಾ ಮುಖ್ಯವಾಗಿರುತ್ತದೆ. ಅಪೋಸ್ತಲನಾದ ಪೌಲನು ಹೀಗೆ ಹೇಳಿದ್ದಾನೆ ” ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ದೇವರ ಕೃಪೆಯನ್ನು ಆತುಕೊಂಡು ಮನಸ್ಸನ್ನು ದೃಢಮಾಡಿಕೊಳ್ಳುವದು ಉತ್ತಮವೇ” (ಇಬ್ರಿ 13:9)
ಎರಡು ಕಾರ್ಯಗಳು ನಮ್ಮ ಹೃದಯವನ್ನು ಸ್ಥಿರಪಡಿಸುತ್ತವೆ: ದೇವರಿಗಾಗಿ ಕಾಯುವುದು ಮತ್ತು ದೇವರ ಕೃಪೆ. ಆದರೆ ದೇವರು ನಮ್ಮನ್ನು ದೃಢಪಡಿಸಬೇಕಾದರೆ ನಮ್ಮ ಹೃದಯಗಳನ್ನು ಆತನಿಗೆ ಇಷ್ಟಪೂರ್ವಕವಾಗಿ ಸಮರ್ಪಿಸಬೇಕು. ಇದಕ್ಕೆ ತಾಳ್ಮೆ ತುಂಬಾ ಮುಖ್ಯವಾಗಿರುತ್ತದೆ. ಕಾಯುವುದು ನಿಜಕ್ಕೂ ಕಠಿಣವಾದ ಕಾರ್ಯವಾಗಿದೆ. ಆದರೂ ಅದು ತುಂಬಾ ಅಗತ್ಯವಾಗಿದೆ. ನಮ್ಮ ಪ್ರಸ್ತುತ ತಾಳ್ಮೆರಹಿತ ಪ್ರಪಂಚದಲ್ಲಿ ಕರ್ತನಿಗಾಗಿ ಕಾಯುವುದು ಕಷ್ಟಕರವಾದ ಕೆಲಸವಾಗಿದೆ. ಕೆಲವರು ಕರ್ತನಿಗಾಗಿ ಕಾಯುವುದರ ಬದಲು ರಾಜಕೀಯ ನಾಯಕರಿಗಾಗಿ , ಇತರರು ಉದ್ಯೋಗಗಳಿಗಾಗಿ, ಅಥವಾ ಕಾಲೇಜು ನೊಂದಣಿಗಾಗಿ ಕಾಯುವವರಾಗಿದ್ದಾರೆ. ಆದರೆ ಮನುಷ್ಯರ ಮೇಲೆ ಭರವಸೆ ಇಡಬಾರದು ಎಂದು ದೇವರ ವಾಕ್ಯ ಎಚ್ಚರಿಸುತ್ತದೆ.
ದಾವೀದನ್ನು ಗಮನಿಸಿರಿ. ಆತನು ಸ್ಥಿರವಾದ ಹೃದಯವನ್ನು ಹೊಂದಿದ್ದರಿಂದ ಕರ್ತನಿಗಾಗಿ ಕಾದಿದ್ದನು. “ನಾನು ಯೆಹೋವನಿಗೋಸ್ಕರ ನಿರೀಕ್ಷಿಸಿಯೇ ನಿರೀಕ್ಷಿಸಿದೆನು; ಆತನು ನನ್ನ ಮೊರೆಗೆ ಕಿವಿಗೊಟ್ಟು ಲಕ್ಷಿಸಿದನು. ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು: ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು. ಆತನು ನನ್ನ ಬಾಯಲ್ಲಿ ನೂತನ ಕೀರ್ತನೆಯನ್ನು ಹುಟ್ಟಿಸಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ. ಆತನ ಮಹತ್ಕಾರ್ಯಗಳನ್ನು ನೋಡಿದ ಅನೇಕರು ಭಯಭಕ್ತಿಯುಳ್ಳವರಾಗಿ ಯೆಹೋವನಲ್ಲಿ ನಂಬಿಕೆಯಿಡುವರು.” (ಕೀರ್ತ 40:1-3). ಎಂತಹ ಸುಂದರವಾದ ಸಾಕ್ಷಿ!
ಪ್ರಿಯ ದೇವರ ಮಕ್ಕಳೇ, ನಿಮ್ಮ ಹೃದಯಗಳನ್ನು ಬಲಗೊಳಿಸಿಕೊಳ್ಳಿರಿ. ನಾವು ತಾಳ್ಮೆಯಿಂದ ಕಾಯುವಾಗ ದೇವರು ತಾನೇ ನಮ್ಮ ಹೃದಯಗಳನ್ನು ಬಲಪಡಿಸಿ ನಮ್ಮ ಮಾರ್ಗಗಳನ್ನು ಸ್ಥಿರಪಡಿಸುತ್ತಾನೆ. “ನೀವೂ ದೀರ್ಘಶಾಂತಿಯಿಂದಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ. ಕರ್ತನ ಪ್ರತ್ಯಕ್ಷತೆಯು ಹತ್ತಿರವಾಯಿತು.” (ಯಾಕೋ 5:8)
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಧರ್ಮವೇ ನಿನಗೆ ಆಧಾರ; ನೀನು ಹಿಂಸೆಗೆ ದೂರವಾಗಿರುವಿ, ನಿನಗೆ ಹೆದರಿಕೆ ಇರುವುದಿಲ್ಲ, ನಾಶನವು ದೂರವಾಗಿರುವುದು, ನಿನ್ನ ಹತ್ತಿರಕ್ಕೆ ಬಾರದು”. (ಯೆಶಾ 54:14)
