No products in the cart.
ಫೆಬ್ರವರಿ 18 – ದೇವರ ಸಭೆ!
“ನಾನು ನಿನಗೆ ಒಂದು ಮಾತನ್ನು ಹೇಳುತ್ತೇನೆ, ಅದೇನಂದರೆ ನೀನು ಪೇತ್ರನು, ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಪಾತಾಳಲೋಕದ ಬಲವು ಅದನ್ನು ಸೋಲಿಸಲಾರದು.” (ಮತ್ತಾ ೧೬:೧೮)
ಕರ್ತನು ತನ್ನ ಮಕ್ಕಳಿಗೆ ನೀಡುವ ಶ್ರೇಷ್ಠವಾದ ಆಶೀರ್ವಾದಗಳಲ್ಲಿ ಮುಖ್ಯವಾದದ್ದು ದೇವರ ಸಭೆಯಾಗಿದೆ. ಇದು ದೇವರು ನೆಲೆಸುವ ಸ್ಥಳವಾಗಿದೆ. ಪಾತಾಳಲೋಕದ ಬಲವು ದೇವರ ಸಭೆಯನ್ನು ಸೋಲಿಸಲಾರದು. ಸಭೆಯಲ್ಲಿ ವಿಶ್ವಾಸಿಗಳ ಹಾಗೂ ಸೇವಕರ ಮಧ್ಯೆ ಅನ್ಯೋನ್ಯತೆಯಲ್ಲಿ ನಾವು ನೆಲೆಗೊಂಡಿರುವಾಗ, ಅದನ್ನು ಯಾರೂ ಸೋಲಿಸಲಾರರು.
ದೇವರುಸಭೆಯ ಕುರಿತಾಗಿ ಮೂರು ವಾಗ್ದಾನಗಳನ್ನು ನೀಡಿದ್ದಾನೆ:
೧. ನಾನು ನನ್ನ ಸಭೆಯನ್ನು ಕಟ್ಟುವೆನು.
೨. ನಾನು ಸಭೆಗೆ ಪವಿತ್ರಾತ್ಮನನ್ನು ನೀಡಿದ್ದೇನೆ.
೩. ನಾನು ನನ್ನ ಸಭೆಗಾಗಿ ಹಿಂತಿರುಗಿ ಬರುವೆನು.
ಸಭೆಯನ್ನು ದೇವರ ಪಟ್ಟಣವೆಂದು ಕರೆಯುತ್ತೇವೆ. ಹಾಗೂ ಪರಾತ್ಪರನಾದ ದೇವರು ವಾಸಮಾಡುವ ಸ್ಥಳವಾಗಿದೆ. ದೇವರ ವಾಕ್ಯ ಹೇಳುತ್ತದೆ, “ಒಂದು ನದಿ ಅದೆ; ಅದರ ಕಾಲುವೆಗಳು ಪರಾತ್ಪರನ ಪರಿಶುದ್ಧ ನಿವಾಸಸ್ಥಾನವಾಗಿರುವ ದೇವನಗರವನ್ನು ಸಂತೋಷಪಡಿಸುತ್ತವೆ. ದೇವರ ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ. ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು.” (ಕೀರ್ತ ೪೬:೪-೫)
ಪವಿತ್ರಾತ್ಮನು ದೇವರ ನದಿಯಾಗಿದ್ದಾರೆ. ಆರಾಧನೆ ಸಮಯದಲ್ಲಿ ನಾವು ಹಾಡುವ ಹಾಡುಗಳು, ಆತ್ಮಭರಿತರಾಗಿ ಸಲ್ಲಿಸುವ ಸ್ತೋತ್ರಗಳು, ದೇವರಾತ್ಮನಿಂದ ಕೂಡಿದ ಸಂದೇಶಗಳು, ಇವೆಲ್ಲವೂ ದೇವರ ಮಕ್ಕಳ ಆತ್ಮೀಕ ಜೀವನಕ್ಕೆ ಹೊಸ ಚೈತನ್ಯವನ್ನು ನೀಡಿ ಸಂರಕ್ಷಿಸುತ್ತವೆ.
ಸತ್ಯವೇದವು ತಿಳಿಸುತ್ತದೆ, ” ಆ ಮೇಲೆ ಅವನು ಸ್ಫಟಿಕದಂತೆ ಪ್ರಕಾಶಮಾನವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಹೊರಟು ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು.” (ಪ್ರಕ ೨೨:೧) ಪರಲೋಕದ ದೇವರು ಪರಲೋಕದ ನದಿಯನ್ನು ಸಭೆಯ ಮೂಲಕ ಕಳುಹಿಸುತ್ತಾನೆ. ಆ ನದಿಯು ದೇವರ ಮಕ್ಕಳ ದಾಹವನ್ನು ನೀಗಿಸಿ ಅವರನ್ನು ಶುದ್ಧೀಕರಿಸುತ್ತದೆ. ಅದು ನಮ್ಮಲ್ಲಿ ಹರಿಯುತ್ತಾ ನಮ್ಮನ್ನು ಚೈತನ್ಯಪಡಿಸುತ್ತದೆ, ನೂತನ ಪಡಿಸುತ್ತದೆ ಹಾಗೂ ಪುನರ್ ಸ್ಥಾಪನೆ ಮಾಡುತ್ತದೆ.
ಸಭೆಯಾಗಿ ಕೂಡಿ ಬರುವ ಗುಂಪನ್ನು ಅಲ್ಪವಾಗಿ ಪರಿಗಣಿಸಬೇಡಿರಿ. ದೇವಜನರ ಅನ್ಯೋನ್ಯತೆಯು ನಿಮಗೆ ಶ್ರೇಷ್ಠವಾದ ಬಲವನ್ನು ನೀಡಲಿ. “ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೊಣ. ” (ಇಬ್ರಿ ೧೦:೨೫)
ನಾವು ದೇವರ ಆಲಯ ಅಥವಾ ಸಭೆಯ ಕುರಿತು ಮಾತನಾಡುವಾಗ ಅದನ್ನು ಎರಡು ರೀತಿಯಾಗಿ ಅರ್ಥಮಾಡಿಕೊಳ್ಳುತ್ತೇವೆ. ಒಂದು ಕಣ್ಣಿಗೆ ಕಾಣುವ ಸಭೆ – ಕಲ್ಲು ಮರಳಿನಿಂದ ಕಟ್ಟಿದ ಕಟ್ಟಡ, ಅದನ್ನು ನಾವು ದೇವರ ಮಂದಿರ ಎಂದು ಕರೆಯುತ್ತೇವೆ. ಎರಡನೆಯದು, ಕಣ್ಣಿಗೆ ಕಾಣದ ಸಭೆ, ಯೇಸು ಕ್ರಿಸ್ತನ ಆತ್ಮೀಕ ದೇಹ. ಇದು ದೇವರ ಜನರು ಕೂಡಿ ಬರುವ ಸಮೂಹ, ಅವರ ಹೆಸರುಗಳನ್ನು ಪರಲೋಕದಲ್ಲಿ ಬರೆದಿರುತ್ತದೆ. ಇದು ಆತ್ಮನಿಂದ ಐಕ್ಯತೆಯಿಂದ ಇಡೀ ವಿಶ್ವವೇ ವ್ಯಾಪಿಸಿರುವ ಜಾಗತಿಕ ಸಭೆ.
ಪ್ರಿಯ ದೇವರ ಮಕ್ಕಳೇ, ನೀವು ಭೂಲೋಕದಲ್ಲಿರುವ ಸಭೆಗೆ ಅಂಗಗಳಾಗಿ ಆರಾಧನೆ ಮಾಡುವುದರ ಮೂಲಕ ದೇವರನ್ನು ಘನಪಡಿಸಬೇಕು. ಅದೇ ಸಮಯದಲ್ಲಿ ಅದೃಶ್ಯವಾದ ಪರಲೋಕ ಕುಟುಂಬದ ಸದಸ್ಯರಾಗಿದ್ದು ದೈವೀಕ ಆರ್ಶೀವಾದಗಳು ಮತ್ತು ಸಂತೋಷದಲ್ಲಿ ಪಾಲು ತೆಗೆದುಕೊಳ್ಳಬೇಕು. ಇದು ಜೀವಸ್ವರೂಪನಾದ ದೇವರ ಸಭೆಯಾಗಿದೆ. ದೇವರ ಆಲಯದ ಆರ್ಶೀವಾದಗಳು ನಿಮಗಾಗಿ ಕಾಯುತ್ತಿವೆ.
ಮುಂದಿನ ಆಧ್ಯಾಯನಕ್ಕಾಗಿ ದೇವರ ವಾಕ್ಯ: “ನಿನ್ನ ಅಂಗಳದಲ್ಲಿ ವಾಸಿಸುವವರಾಗಿ ನಿನ್ನ ಸನ್ನಿಧಿಯಲ್ಲಿ ಸೇವೆ ಮಾಡುವದಕ್ಕೋಸ್ಕರ ಯಾರನ್ನು ಆರಿಸಿಕೊಳ್ಳುತ್ತಿಯೋ ಅವರೇ ಧನ್ಯರು. ನೀನು ವಾಸಿಸುವ ಮಹಾ ಪವಿತ್ರಾಲಯದ ಸೌಭಾಗ್ಯದಿಂದ ನಮಗೆ ಸಂತೃಪ್ತಿಯಾಗಲಿ.” (ಕೀರ್ತ ೬೫:೪)
