Appam, Appam - Kannada

ಜನವರಿ 09 – ಎಲ್ಲಾ ಜೀವಿಗಳಿಗೆ ಆಹಾರ

“ಭೂಮಿಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳೂ ನಿಮಗೆ ಆಹಾರವಾಗುವವು ನಾನು ನಿಮ್ಮ ಆಹಾರಕ್ಕೆ ಪೈರುಗಳನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ:.” (ಆದಿ ೯:೩)

ದೇವರು ಆದಾಮ ಮತ್ತು ಹವ್ವಳನ್ನು ಸೃಷ್ಟಿ ಮಾಡಿದಾಗ ಅವರಿಗೆ ಗಿಡ ಮರಗಳಿಂದ ಸಿಗುವ ಆಹಾರವನ್ನು ಕೊಟ್ಟನು. (ಆದಿ ೧:೨೯).

ಆದರೆ ನೋಹನ ಕಾಲದ ನಂತರ ದೇವರು ಮನುಷ್ಯರಿಗೆ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರವನ್ನು ನೀಡಲು ಪ್ರಾರಂಭಿಸಿದನು. ಕರ್ತನು ಹೇಳಿದ್ದೇನಂದರೆ ”

“ಭೂಮಿಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳೂ ನಿಮಗೆ ಆಹಾರವಾಗುವವು” ಹಾಗೂ ಸಮುದ್ರದ ಮೀನುಗಳನ್ನು ಅವರಿಗೆ ಆಹಾರವಾಗಿ ನೀಡಿದನು. (ಆದಿ ೯:೨-೩) ಮನುಷ್ಯರಿಗೆ ತೃಪ್ತಿಕರವಾದದ್ದು ಮತ್ತು ಪೋಷಕಾಂಶಗಳನ್ನು ನೀಡುವ ಆಹಾರವನ್ನು ದೇವರು ಕೃಪೆಯಿಂದ ಅನುಗ್ರಹಿಸಿದನು.

ಒಂದು ಸಂದರ್ಭದಲ್ಲಿ ಇಸ್ರಾಯೇಲ್ಯರು ಮೋಶೆ ಮತ್ತು ಆರೋನನ ವಿರುದ್ಧ ಗುಣುಗುಟ್ಟುತ್ತಾ ” ಈ ಅರಣ್ಯದಲ್ಲಿ ತಿನ್ನಲು ನಮಗೆ ಮಾಂಸವನ್ನು ಯಾರು ಕೊಡುತ್ತಾರೆ? ನಾವು ಮಾಂಸವನ್ನು ಆಶಿಸುತ್ತೇವೆ… ಪ್ರತಿ ದಿನ ಈ ಮನ್ನವನ್ನು ಸೇವಿಸಿ ನಾವು ಬಳಲಿ ಹೋಗಿದ್ದೇವೆ”. ಆಗ ದೇವರು ಗಾಳಿಯನ್ನು ಬರಮಾಡಿದನು, ಇದರ ನಿಮಿತ್ತ ಹೇರಳವಾಗಿ ಲಾವಕ್ಕಿಗಳು ಅವರ ಡೇರೆಗಳ ಬಳಿ ಬಿದ್ದವು. ಜನರು ತಿಂದು ತೃಪ್ತರಾದರು.

ದೇವರು ಮೂರು ಅಲೌಕಿಕ ವಿಧಾನಗಳಲ್ಲಿ ಎಲಿಯನಿಗೆ ಆಹಾರವನ್ನು ನೀಡಿದನು.

ಕಾಗೆಗಳ ಮೂಲಕ: ಕಾಗೆಗಳು ಅವನಿಗೆ ಪ್ರಾತಃಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ರೊಟ್ಟಿ, ಮಾಂಸ ಇವುಗಳನ್ನು ತಂದುಕೊಡುತ್ತಿದ್ದವು” (೧ ಅರಸು ೧೭:೬)

ಚಾರೆಪ್ತದ ವಿದವೆಯ ಮೂಲಕ: ” ನಾನು ದೇಶಕ್ಕೆ ಮಳೆ ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ. ಮೊಗೆಯಲ್ಲಿರುವ ಎಣ್ಣೆಯು ಮುಗಿದು ಹೊಗುವದಿಲ್ಲ ಎಂದು ಹೇಳುತ್ತಾನೆ ಅಂದನು. (೧ ಅರಸ ೧೭:೧೩-೧೪)

ದೇವ ದೂತನ ಮೂಲಕ: “ದೇವದೂತನು ಎಲಿಯನಿಗೆ ಕೆಂಡದಲ್ಲಿ ಸುಟ್ಟ ರೊಟ್ಟಿಯನ್ನು ಒಂದು ತಂಬಿಗೆ ನೀರನ್ನು ಕೊಟ್ಟನು” (೧ ಅರಸ ೧೯:೬)

ದೇವರು ಕೂಡ ನಿಮ್ಮನ್ನು ಅತ್ಯುತ್ತಮವಾಗಿ ಪೋಷಿಸುತ್ತಾರೆ. ” ಹೀಗಿರುವುದರಿಂದ – ಏನು ಊಟ ಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ….ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ನಿಮ್ಮ ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆಯಷ್ಟೆ.” (ಮತ್ತಾಯ ೬:೩೧-೩೨)

ಈ ಲೋಕದಲ್ಲಿ ಆತನು ಸೇವೆ ಮಾಡುತ್ತಿದ್ದಾಗ , ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಐದು ಸಾವಿರ ಜನರಿಗೆ ಆಹಾರವನ್ನು ಒದಗಿಸಿದನು. ಮತ್ತು ೭ ರೊಟ್ಟಿಗಳು ಮತ್ತು ಒಂದು ಸಣ್ಣ ಮೀನಿನಿಂದ ೪ ಸಾವಿರ ಜನರಿಗೆ ಊಟ ಬಡಿಸಿದನು. ಈ ದೊಡ್ಡ ಗುಂಪಿನ ಜನರು ರೊಟ್ಟಿ ಮತ್ತು ಮೀನನ್ನು ತಿಂದು ಸಂತೃಪ್ತರಾದರು.

ಪುನರುತ್ತಾನದ ನಂತರ, ತಿಬೇರಿಯಾ ಸಮುದ್ರದ ತೀರದಲ್ಲಿ ಯೇಸು ಕ್ರಿಸ್ತನು ಪ್ರೀತಿಯಿಂದ ತನ್ನ ಶಿಷ್ಯರಿಗೆ ಆಹಾರವನ್ನು ಸಿದ್ಧಪಡಿಸಿದನು. ಮೊತ್ತೊಮ್ಮೆ ಅವರಿಗೆ ಮೀನಿನ ಊಟ ನೀಡಲಾಯಿತು. ದೇವರ ವಾಕ್ಯ ಹೇಳುತ್ತದೆ “ಅವರು ಭೂಮಿಗೆ ಇಳಿದಾಗ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನೂ ರೊಟ್ಟಿಸಹಿತವಾಗಿ ಕಂಡರು”. (ಯೋಹಾ ೨೧:೯)

ದೇವರ ಮಕ್ಕಳೇ, ಈ ನೂತನ ವರ್ಷದಲ್ಲಿ ದೇವರು ಸ್ವತಃ ನಿಮಗೆ ಉಣಬಡಿಸಲಿ, ಪೋಷಿಸಲಿ ಮತ್ತು ಆತನ ಒಳ್ಳೆತನದಲ್ಲಿ ನಡೆಸಲಿ!

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಪರಲೋಕದಿಂದ ಇಳಿದು ಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು. ಮತ್ತು ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೊಸ್ಕರ ಕೊಡುವೆನು: ಎಂದು ಹೇಳಿದನು. (ಯೋಹಾ ೬:೫೧)

Leave A Comment

Your Comment
All comments are held for moderation.