No products in the cart.
ಮಾರ್ಚ್ 25 – ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ!
“ಪ್ರೀತಿ ದಯೆ ತೋರಿಸುವದು. ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ.” (೧ ಕೊರಿ ೧೩:೪)
ಪ್ರೀತಿ ತುಂಬಿದ ಹೃದಯದಲ್ಲಿ ಅಸೂಯೆ ಕಾಣಿಸಲು ಸಾಧ್ಯವಿಲ್ಲ. ಪ್ರೀತಿಯು ಎಲ್ಲವನ್ನು ಅಡಗಿಸಿಕೊಳ್ಳುತ್ತದೆ, ಎಲ್ಲವನ್ನು ನಂಬುತ್ತದೆ, ಎಲ್ಲಾ ವಿಷಯಗಳನ್ನು ನಿರೀಕ್ಷಿಸುತ್ತದೆ, ಎಲ್ಲವನ್ನು ಸಹಿಸಿಕೊಳ್ಳುತ್ತದೆ. ಎಲ್ಲಿ ಅಂತಹ ಪ್ರೀತಿಯು ಆಳ್ವಿಕೆ ಮಾಡುತ್ತದೆಯೋ, ಅಲ್ಲಿ ಹೊಟ್ಟೆಕಿಚ್ಚು ನೆಲೆಸಿರುವದಿಲ್ಲ. ಪ್ರೀತಿಯು ಹೊಟ್ಟಕಿಚ್ಚುಪಟ್ಟುಕೊಳ್ಳುವದಿಲ್ಲ.
ಹೊಟ್ಟಕಿಚ್ಚು ನಾಶನವನ್ನು ಉಂಟುಮಾಡುತ್ತದೆ. “ಕ್ರೋಧವು ಎಲುಬಿಗೆ ಕ್ಷಯವು” (ಜ್ಞಾನೋ ೧೪:೩೦). ಈ ಸ್ವಭಾವವು ಲೂಸಿಫರನ ಹೃದಯದಲ್ಲಿ ಹುಟ್ಟಿತು. ಅತನು ದೇವರೊಂದಿಗೆ ತನ್ನನ್ನು ಸಮಾನವೆಂದು ಭಾವಿಸಿದನು ಮತ್ತು ತನ್ನನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದನು. ಅದರ ನಿಮಿತ್ತ ಆತನು ಪರಲೋಕದಿಂದ ದೊಬ್ಬಲ್ಪಟ್ಟನು. ಆತನ ಹೊಟ್ಟಕಿಚ್ಚಿನಿಂದ ಎಂತಹ ಶೋಚನೀಯವಾದ ಬೀಳುವಿಕೆಯಾಗಿದೆ. ದೇವರ ಮಕ್ಕಳೇ ಹೊಟ್ಟಕಿಚ್ಚಿಗೆ ಅವಕಾಶವನ್ನು ಕೊಡಬೇಡಿರಿ.
ದೇವರು ಹೇಬೇಲನ ಕಾಣಿಕೆಯನ್ನು ಅಂಗೀಕರಿಸಿಕೊಂಡಾಗ, ಕಾಯಿನನು ಸಂತೋಷಪಡಲಿಲ್ಲ. ತನ್ನ ಸ್ವಂತ ಸಹೋದರನು ದೇವರಿಂದ ಆರ್ಶೀವಾದವನ್ನು ಹೊಂದಿದ್ದಾನೆ ಎಂಬುದಕ್ಕೆ ಸಂತೋಷಪಡದೇ, ಆತನ ಹೃದಯದಲ್ಲಿ ಅಸೂಯೆಯು ಬಂದಿತು. ಆ ಅಸೂಯೆಯು ದ್ವೇಷ ಮತ್ತು ಕೊಲೆಯಲ್ಲಿ ಅಂತ್ಯವಾಯಿತು. ಕಾಯಿನನು ತನ್ನ ಸಹೋದರನ ವಿರುದ್ಧವಾಗಿ ಎದ್ದು ಅವನನ್ನು ಹತ್ಯೆ ಮಾಡಿದನು. (ಆದಿ ೪:೩-೮) ಇದುವೇ ಹೊಟ್ಟಕಿಚ್ಚಿನ ಫಲವಾಗಿದೆ.
ಈ ದಿನದಲ್ಲಿಯೂ ಎಲ್ಲೆಲ್ಲಿ ಹೊಟ್ಟಕಿಚ್ಚು ಮತ್ತು ದ್ವೇಷ ಜನರ ಮಧ್ಯೆ ಇರುತ್ತದೋ ಅಲ್ಲಿ ಕಾಯಿನನ ಆತ್ಮವು ಕಾರ್ಯಮಾಡುತ್ತದೆ. ನಮ್ಮ ಸಹೋದರನು ಅಭಿವೃದ್ಧಿ ಹೊಂದುವಾಗ ನಾವು ದೇವರಿಗೆ ಸ್ತೋತ್ರಮಾಡಿ ಸಂತೋಷ ಪಡುವವರಾಗಿರಬೇಕು. ಒಬ್ಬರಲ್ಲಿ ನಾವು ತಪ್ಪನ್ನು ನೋಡುವಾಗ, ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಅವರಿಗೆ ಅವಮಾನ ಮಾಡಬಾರದು. ಬದಲಿಗೆ ಪ್ರಾರ್ಥನೆಯಲ್ಲಿ ಕ್ಷಮಿಸಿ, ಆ ಬಲಹೀನತೆಯಿಂದ ಹೊರಬರಲು ಸಹಾಯ ಮಾಡಬೇಕು.
ಯೋಸೇಪನ ಕುರಿತು ಆಲೋಚಿಸಿರಿ, ಆತನ ಸಹೋದರರು ಅವನನ್ನು ದ್ವೇಷಿಸಿದರು. ಹೊಟ್ಟಕಿಚ್ಚಿನ ಕಾರಣದಿಂದ ಅವನನ್ನು ಬಾವಿಯೊಳಕ್ಕೆ ಎಸೆದರು ಹಾಗೂ ಹತ್ಯೆ ಮಾಡಲು ಪ್ರಯತ್ನಿಸಿದರು. ಕೊನೆಗೆ ಅವನನ್ನು ಮಿದ್ಯಾನ್ಯರಿಗೆ ದಾಸತ್ವಕ್ಕೆ ಮಾರಿಬಿಟ್ಟರು. ಆದರೆ ಅದರ ಪ್ರತಿಫಲ ಏನಾಗಿತ್ತು?
ಯೋಸೇಪನನ್ನು ದ್ವೇಷಿಸಿ, ಅಸೂಯೆ ಹೊಂದಿರುವ ಅವರ ಸಹೋದರರು, ಮುಂದೆ ಒಂದು ದಿನ ಅವನ ಬಳಿ ಬಂದು ಸಾಷ್ಟಾಂಗವೆರಗಿ ನಮಸ್ಕರಿಸಿದರು. ಈ ದಿನ ನಿಮ್ಮನ್ನು ದ್ವೇಷಿಸಿದವರು ಒಂದು ದಿನ ನಿಮ್ಮ ಮುಂದೆ ದೀನ ಭಾವದಿಂದ ನಿಂತುಕೊಳ್ಳುವರು.
ಬ್ಯಾಬಿಲೋನಿನ ಹಿರಿಯರು ಮತ್ತು ಅಧಿಕಾರಿಗಳು ದಾನಿಯೇಲನ ಮೇಲಿನ ಅಸೂಯೆಯಿಂದಾಗಿ ಅವನ ಮೇಲೆ ಸಳ್ಳು ಆರೋಪಗಳನ್ನು ಹಾಕಿ ಅವನನ್ನು ಅರಸನ ಮುಂದೆ ಒಪ್ಪಿಸಿದರು. ದಾನಿಯೇಲನನ್ನು ಸಿಂಹದ ಗವಿಯೋಳಗೆ ಹಾಕಿಸಿದರು. ಆದರೂ ದೇವರು ಅವನನ್ನು ಬಿಡಿಸಿದನು. ಆತನ ಮೇಲೆ ತಪ್ಪಾದ ಆರೋಪಗಳನ್ನು ಮಾಡಿದವರನ್ನು ಸಿಂಹದ ಗವಿಯೋಳಗೆ ಹಾಕಿಸಿದರು.
ಒಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ದೈವೀಕ ಪ್ರೀತಿಯನ್ನು ತುಂಬಿಸಿಕೊಳ್ಳುವಾಗ, ಅವನ ಬಳಿಗೆ ದ್ವೇಷ ಮತ್ತು ಅಸೂಯೆಯು ಬರಲು ಸಾಧ್ಯವಾಗುವುದಿಲ್ಲ. ಆದಕಾರಣ ಪ್ರಿಯ ದೇವರ ಮಕ್ಕಳೇ, ಕಲ್ವಾರಿಯ ಪ್ರೀತಿಯಿಂದ ನಿಮ್ಮನ್ನು ತುಂಬಿಸಿಕೊಳ್ಳುವ ಹಾಗೆ ನಿಮ್ಮನ್ನು ಕರ್ತನಿಗೆ ಒಪ್ಪಿಸಿಕೊಡಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಎಲ್ಲಾ ತರದ ನಿಂದೆಯನ್ನೂ ವಿಸರ್ಜಿಸಿ ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ
ಹಾಲನ್ನು ಬಯಸಿರಿ; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ: ಕರ್ತನು ದಯಾಳುವೆಂದು ನೀವು ಅನುಭವದಿಂದ ತಿಳಿದುಕೊಂಡಿದ್ದೀರಲ್ಲವೋ”. (೧ ಪೇತ್ರ ೨:೨-೩)
