No products in the cart.
ಮಾರ್ಚ್ 12 – ತಂದೆಯಂತಹ ಪ್ರೀತಿ!
“ಕೂಸನ್ನು ಎತ್ತಿಕೊಂಡು ಹೋಗುವವನಂತೆ ಈ ಜನರನ್ನು ಹೊತ್ತುಕೊಂಡುಹೋದೆನು” (ಅರಣ್ಯ ೧೧:೧೨)
ನಮ್ಮ ಅಮೂಲ್ಯನಾದ ಕರ್ತನು ನಮಗೆ ಪ್ರೀತಿ ಸ್ವರೂಪನು ಹಾಗೂ ಕೃಪೆಯುಳ್ಳ ತಂದೆಯೂ ಆಗಿದ್ದಾನೆ. ಕಾರಣ ಆತನು ನಿತ್ಯತ್ವದ ತಂದೆಯಾಗಿದ್ದಾರೆ. ಆತನಿಗೆ ನಿತ್ಯನಾದ ತಂದೆ ಎಂಬ ಹೆಸರು ಇದೆ. (ಯೆಶಾ ೯:೬)
“ನಿತ್ಯನಾದ ತಂದೆʼ ಎಂಬ ಪದಕ್ಕೆ ಅರ್ಥವೇನು? ಅದರ ಅರ್ಥ ಆತನು ನೆನ್ನೆ, ಈ ಹೊತ್ತು ಮತ್ತು ನಿರಂತರವೂ ತಂದೆಯಾಗಿದ್ದಾನೆ. ನಿತ್ಯತ್ವದ ವರೆಗೂ ಆತನು ನಮಗೆ ತಂದೆಯಾಗಿರುತ್ತಾನೆ. ಆತನು ನಮಗೆ ದೇವರು ಮತ್ತು ತಂದೆಯಾಗಿರುವುದು ಎಷ್ಟು ಭಾಗ್ಯಕರವಾದ ಆರ್ಶೀವಾದವಲ್ಲದೇ. ಆತನು ನಮ್ಮನ್ನು ಹೊರುವ ತಂದೆಯಾಗಿದ್ದಾರೆ. (ಅರಣ್ಯ ೧೧:೧೨)
ಮೊದಲನೆಯದಾಗಿ, ಒಬ್ಬ ತಂದೆಯು ತನ್ನ ಮಗುವನ್ನು ಹೆಗಲ ಮೇಲೆ ಹೊತ್ತುಕೊಳ್ಳುವನು. ಮಗುವು ತನ್ನ ಮುದ್ದಾದ ಕಾಲುಗಳನ್ನು ತಂದೆಯ ಎದೆಯ ಮೇಲೆ ಚಾಚುವನು, ಭುಜದ ಮೇಲೆ ಗರ್ವದಿಂದ ಕುಳಿತುಕೊಂಡು ತಂದೆಯ ಕೂದಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುವನು. ತಂದೆಯು ಮಗುವನ್ನು ಹೊತ್ತುಕೊಂಡು ನಡೆಯುವನು. ಮಗು ಸಂತೋಷದಿಂದ ರಾಜ ಗಾಂಭೀರ್ಯದಿಂದ ತಂದೆಯ ಮೇಲೆ ಕುಳಿತು ಸವಾರಿ ಮಾಡುತ್ತಾನೆ. ನಮ್ಮ ರಕ್ಷಕನಾದ ದೇವರು ನಮ್ಮ ಹಿಂದೆ ನಡೆಯುವುದಿಲ್ಲ, ನಮ್ಮನ್ನು ಹೊತ್ತುಕೊಂಡು ನಡೆಯುವನು.
ಎರಡನೆಯದು, ಒಬ್ಬ ತಂದೆಯು ತನ್ನ ಮಕ್ಕಳಿಗೆ ಆಲೋಚನೆ ಕೊಡುವನು. ಸತ್ಯವೇದವು ಹೇಳುತ್ತದೆ, “ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾನವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ಧಿ ಹೇಳುತ್ತಾ ಧೈರ್ಯಪಡಿಸುತ್ತಾ ತನ್ನ ರಾಜ್ಯ ಪ್ರಭಾವಗಳಲ್ಲಿ ಪಾಲುಗಾರರಾಗುವದಕ್ಕೆ ಕರೆಯುವ ದೇವರಿಗೆ ಯೋಗ್ಯರಾಗಿ ನೀವು ನಡೆಯಬೇಕೆಂದು ಖಂಡಿತವಾಗಿ ಹೇಳುತ್ತಾ ಇದ್ದೆವೆಂಬದು ನಿಮಗೆ ತಿಳಿದದೆ.” (೧ ಥೆಸ ೨:೧೧-೧೨)
ಹೌದು, ದೇವರು ತನ್ನ ಸೇವಕರ ಮೂಲಕ ನಮಗೆ ಆಪ್ತಸಮಾಲೋಚನೆಯನ್ನು ನೀಡುತ್ತಾನೆ. ತನ್ನ ವಾಕ್ಯದ ಮೂಲಕ ಆಲೋಚನೆಯನ್ನು ನೀಡುತ್ತಾನೆ. ಆತನ ಆಲೋಚನೆಯ ಮೂಲ ಉದ್ದೇಶ ನಮ್ಮನ್ನು ಉತ್ತಮ ಸ್ಥಾನಕ್ಕೆ ನಡೆಸುವುದಾಗಿದೆ. ಆತನ ಮಾರ್ಗದರ್ಶನವು ಸಂತೋಷಕರವಾಗಿದೆ, ಅಮೂಲ್ಯವಾಗಿದೆ ಮತ್ತು ಪರಿಪೂರ್ಣವಾಗಿದೆ.
ಮೂರನೆಯದಾಗಿ, ಒಬ್ಬ ತಂದೆಯು ಮಕ್ಕಳನ್ನು ಶಿಸ್ತುಗೊಳಿಸುತ್ತಾನೆ. ಮಕ್ಕಳ ಹೃದಯದಲ್ಲಿ ಮೂರ್ಖತನವು ತುಂಬಿರುತ್ತದೆ, ಆತನನ್ನು ಶಿಸ್ತುಗೊಳಿಸುವುದು ಒಬ್ಬ ತಂದೆಯ ಜವಬ್ಧಾರಿಯಾಗಿದೆ. ಸತ್ಯವೇದ ತಿಳಿಸುತ್ತದೆ, ” ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವರನ್ನೇ ಗದರಿಸುತ್ತಾನೆ.” (ಜ್ಞಾನೋ ೩:೧೨)
ಮತ್ತೆ ನಾವು ಓದುತ್ತೇವೆ. ” ಇದು ಮಾತ್ರವಲ್ಲದೇ ನಮ್ಮನ್ನು ಶಿಕ್ಷಿಸಿದಂಥ ಶರೀರ ಸಂಬಂಧವಾದ ತಂದೆಗಳನ್ನು ಸನ್ಮಾನಿಸಿದೆವಷ್ಟೆ ನನ್ನ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಜೀವಿಸಬೇಕಲ್ಲವೇ. ಆ ತಂದೆಗಳು ಕೆಲವು ದಿವಸಗಳ ಪ್ರಯೋಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುವನು.” (ಇಬ್ರಿಯ ೧೨:೯-೧೦).
ನಾಲ್ಕನೆಯದಾಗಿ, ಒಬ್ಬ ತಂದೆಗೆ ತನ್ನ ಮಕ್ಕಳ ಬಗ್ಗೆ ಕರುಣೆ ಇರುತ್ತದೆ. (ಯೋಬ ೩೧:೧೮). ಪ್ರಪಂಚದ ತಂದೆಗಳು ಮಕ್ಕಳ ಕ್ಷೇಮಾಭಿವೃದ್ಧಿ ಕಾರ್ಯಗಳ ಕುರಿತಾಗಿ ಹಾತೋರೈಯುವವರಾಗಿದ್ದಾರೆ. ಇನ್ನೂ ನಮ್ಮನ್ನು ಉಂಟುಮಾಡಿರುವ ಸರ್ವಶಕ್ತನಾದ ದೇವರು ನಮ್ಮನ್ನು ಪರಿಪೂರ್ಣವಾಗಿ, ಪ್ರೀತಿಸುತ್ತಾ ತನ್ನ ಕಾಳಜಿಯನ್ನು, ಕರುಣೆಯನ್ನು ತೋರಿಸುವವನಲ್ಲವೇ? ದೇವರು ನಮಗೆ ಒಡೆಯನಾಗಿಯೂ ಮತ್ತು ನಿತ್ಯನಾದ ತಂದೆಯಾಗಿಯೂ ಇರುವದು ನಮ್ಮ ನಿಜವಾದ ಸೌಲಭ್ಯವಾಗಿದೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ”. (ಕೀರ್ತ ೧೦೩:೧೩)
