Appam, Appam - Kannada

ಮಾರ್ಚ್ 02 – ಕ್ರಿಸ್ತನ ಪ್ರೀತಿ!

“ನಿನ್ನ ಲಾಲನೆಯು ದ್ರಾಕ್ಷಸರಸಕ್ಕಿಂತಲೂ ಮೇಲು,” (ಪರಮ ಗೀತೆ ೧:೨)

ಒಬ್ಬ ಆತ್ಮೀಯ ವಿಶ್ವಾಸಿಯು ಒಮ್ಮೆ ಕ್ರಿಸ್ತನ ಪ್ರೀತಿ ಯಾವದಕ್ಕೆ ಹೋಲಿಕೆಯಾಗಿದೆ ಎಂಬ ವಿಷಯದ ಕುರಿತು ಧ್ಯಾನಿಸುತ್ತಿದ್ದನು. ಅದು ಬಂಗಾರ ಅಥವಾ ಐಶ್ಚರ್ಯಕ್ಕೆ ಹೋಲಿಕೆಯಾಗಿರಬಹುದು. ಅಥವಾ ಉನ್ನತ ಸ್ಥಳ ಮತ್ತು ಗೌರವಯುತ ಸ್ಥಾನಕ್ಕೆ ಹೋಲಿಕೆ ಮಾಡಬಹುದಾ? ತುಂಬಾ ಆಲೋಚಿಸಿದ ಮೇಲೆ ಆತನು ಕರ್ತನ ಪ್ರೀತಿಯನ್ನು ದ್ರಾಕ್ಷರಸಕ್ಕೆ ಹೋಲಿಸಿದನು.

ಯಾಕೆ ದ್ರಾಕ್ಷರಸ? ದ್ರಾಕ್ಷಿಗಳನ್ನು ಹಿಂಡುವಾಗ ಕೆಂಪಾದ ರಸವು ಬರುತ್ತದೆ. ಯೇಸು ಕ್ರಿಸ್ತನು ತನ್ನ ಪ್ರೀತಿಯ ಸಂಪೂರ್ಣತೆಯನ್ನು ತೊರ್ಪಡಿಸಲು ದ್ರಾಕ್ಷೆ ಹಣ್ಣುಗಳು ಹಿಂಡಲ್ಪಡುವ ರೀತಿಯಲ್ಲಿಯೇ ಶಿಲುಬೆಯಲ್ಲಿ ನಮಗಾಗಿ ಜಜ್ಜಲ್ಪಡಬೇಕಾಯಿತು. ಆತನು ಹೊಡೆತಗಳನ್ನು ತಿಂದನು, ಗಾಯಗೊಂಡನು ಮತ್ತು ತನ್ನ ಕೊನೆಯ ರಕ್ತದ ಹನಿಯನ್ನು ನಮಗಾಗಿ ಸುರಿಸಿದನು. ಇಂತಹ ಪ್ರೀತಿಗೆ ಹೋಲಿಸಲು ಬೇರೆ ಯಾವ ಪ್ರೀತಿಯು ಈ ಲೋಕದಲ್ಲಿ ಸಿಗುವದಿಲ್ಲ.

ನಾವು ಯೇಸು ಕ್ರಿಸ್ತನ ಪ್ರೀತಿಯ ಕುರಿತು ಧ್ಯಾನಿಸುವಾಗ, ದೇವರು ನಮ್ಮೊಳಗೆ ನೆಲೆಸಿರುವನಾಗಿ ನಮ್ಮನ್ನು ಆಳವಾಗಿ ಪ್ರೀತಿಸುತ್ತಾನೆ. ಆತನು ಸಮಸ್ತವನ್ನು ಉಂಟುಮಾಡಿದ ಸೃಷ್ಟಿಕರ್ತನು ಎಂಬುದಾಗಿ ನಾವು ನಂಬುತ್ತೇವೆ. ನಾವು ಆತನಲ್ಲಿ ಕರುಣೆಯ ತಂದೆಯನ್ನು ನೋಡುತ್ತೇವೆ. ಆತನಲ್ಲಿ ನಾವು ತಾಯಿಯ ಸಂತೈಸುವಿಕೆಯ ಪ್ರೀತಿಯನ್ನು ಅನುಭವಿಸುತ್ತೇವೆ.

ಆತನು ಆಲೋಚನಕರ್ತನಾಗಿ, ಬೋಧಕನಾಗಿ, ಸಹೋದರನಾಗಿ, ಸ್ನೇಹಿತನಾಗಿ, ಆತ್ಮಗಳನ್ನು ಪ್ರೀತಿಸುವ ಪ್ರಿಯಕರನಾಗಿ ನಮ್ಮನ್ನು ಪ್ರೀತಿಸುತ್ತಾನೆ. ಈ ಮೇಲಿನ ಎಲ್ಲಾ ಪ್ರೀತಿಯ ವ್ಯಕ್ತಪಡಿಸುವಿಕೆಗಳಿಗಿಂತ ಕಲ್ವಾರಿ ಬೆಟ್ಟದ ಮೇಲೆ ತನ್ನನ್ನು ದಂಡನೆಗೆ ಒಳಪಡಿಸಿ, ಹೊಡೆತಗಳನ್ನು ಸ್ವೀಕರಿಸಿ, ಗಾಯಗೊಂಡು ತೋರಿಸಿದ ಪ್ರೀತಿಯು ಶ್ರೇಷ್ಟವಾಗಿದೆ ಮತ್ತು ಅದನ್ನು ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ದೇವರ ವಾಕ್ಯ ತಿಳಿಸುತ್ತದೆ, ದೇವರ ಪ್ರೀತಿಯು ದ್ರಾಕ್ಷರಸಕ್ಕಿಂತಲೂ ಸಿಹಿಯಾಗಿದೆ.

ಯೇಸು ಕ್ರಿಸ್ತನ ಸೇವೆಯ ಪ್ರಾರಂಭದಲ್ಲಿ ಮದುವೆಯ ಸಮಾರಂಭದಲ್ಲಿ ನೀರನ್ನು ದ್ರಾಕ್ಷರಸವನ್ನಾಗಿ ಮಾರ್ಪಡಿಸಿದರು. ಆತನು ಆ ಸ್ಥಳದಲ್ಲಿ ಕಾಣಿಸಿದ ಕೊರತೆಯನ್ನು ನೀಗಿಸಿದನು ಮತ್ತು ಅದ್ಭುತವನ್ನು ಮಾಡಿದನು. ಆ ದ್ರಾಕ್ಷರಸದ ರುಚಿ ನೊಡಿದವರು, ಇದು ಹಿರಿದನ ದ್ರಾಕ್ಷರಸಕ್ಕಿಂತಲೂ ರುಚಿಯಾಗಿದೆ ಎಂದು ಸಾಕ್ಷೀಕರಿಸಿದರು. ಅದೇ ಪ್ರಕಾರ ಆತನ ಪ್ರೀತಿಯು ನಮ್ಮ ಕೊರತೆಯ ಜೀವನವನ್ನು ತುಂಬಿಸಿ ನಮಗೆ ಸಂಪೂರ್ಣತೆಯನ್ನು ಅನುಗ್ರಹಿಸಿದೆ.

ಯೇಸುಕ್ರಿಸ್ತನು ತನ್ನ ಭೂಲೋಕದ ಸೇವೆಯ ಕೊನೆಯ ಹಂತಕ್ಕೆ ಬಂದಾಗ, ತಾನು ಗೆತ್ಸೆಮೆನೆ ತೋಟಕ್ಕೆ ಹೋಗುವದಕ್ಕಿಂತ ಮುಂಚೆ ತನ್ನ ಶಿಷ್ಯರ ಸಂಗಡ ಕಡೆಯ ಭೋಜನವನ್ನು ಮಾಡಿದನು. ಆ ಸಮಯದಲ್ಲಿ ದ್ರಾಕ್ಷರಸದ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ಇದು ನಿಮ್ಮೆಲ್ಲರಿಗಾಗಿ ಸುರಿಸಲ್ಪಡುವ ಒಡಂಬಡಿಕೆಯನ್ನು ಸೂಚಿಸುತ್ತದೆ ಎಂದು ಹೇಳಿದನು. ಪ್ರಾರಂಭದಲ್ಲಿ ನೀರನ್ನು ದ್ರಾಕ್ಷರಸವನ್ನಾಗಿ ಮಾರ್ಪಡಿದಾತನು ಈಗ ತನ್ನ ರಕ್ತವನ್ನು ಸೂಚಿಸುವ ದ್ರಾಕ್ಷರಸದ ಕುರಿತು ಮಾತನಾಡುತ್ತಿದ್ದಾರೆ.

ಆದರೆ ಶಿಷ್ಯರು ಯೇಸು ಕ್ರಿಸ್ತನ ಮಾತುಗಳನ್ನು ಆ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಲಿಲ್ಲ. ಆದರೆ ಮರುದಿನ ಯೇಸುವನ್ನು ಸೆರೆಹಿಡಿದು, ವಿಚಾರಣೆಗೆ ಒಳಪಡಿಸಿದಾಗ, ಮುಳ್ಳಿನ ಕೀರಿಟವನ್ನು ತೊಡಿಸಿದಾಗ, ಆತನ ದೇಹವು ಜಜ್ಜಲ್ಪಟ್ಟು ಗಾಯಗೊಂಡಾಗ, ಆತನ ಕೈಗಳಲ್ಲಿ ಹಾಗೂ ಕಾಲುಗಳಲ್ಲಿ ಮೊಳೆಗಳು ಜಡಿಯಲ್ಪಟ್ಟಾಗ, ಆತನ ಪಕ್ಕೆಯಲ್ಲಿ ಈಟಿಯನ್ನು ತಿವಿದಾಗ ಅವರು ಯೇಸುಕ್ರಿಸ್ತನ ಪ್ರೀತಿಯು ದ್ರಾಕ್ಷರಸಕ್ಕಿಂತಲೂ ರುಚಿಯಾಗಿದೆ ಎಂದು ಅರ್ಥಮಾಡಿಕೊಂಡರು.

ಪ್ರಿಯ ದೇವರ ಮಕ್ಕಳೇ, ನಿಮಗಾಗಿ ತನ್ನ ಪ್ರಾಣವನ್ನು ಸಮರ್ಪಿಸಿದ ದೇವರ ಕುಮಾರನನ್ನು ದೃಷ್ಟಿಸಿ ನೊಡಿರಿ. ಆತನ ಶರೀರದಲ್ಲಿ ಧಾರಕಾರವಾಗಿ ಸುರಿದ ಆತನ ರಕ್ತವು, ಆತನ ಪಕ್ಕೆಯಲ್ಲಿ ತಿವಿದ ಗಾಯವು, ಕೈ ಕಾಲುಗಳಲ್ಲಿ ಜಡಿದ ಮೊಳೆಗಳು ಆತನ ಶ್ರೇಷ್ಟವಾದ ಪ್ರೀತಿಯನ್ನು ತೋರಿಸುತ್ತದೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡಿದ್ದೇನೆ; ಇನ್ನು ಜೀವಿಸುವವನು ನಾನಲ್ಲ; ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ಹೇಗಂದರೆ ದೇವಕುಮಾರನ ಮೇಲಣ ನಂಬಿಕೆಯಲ್ಲಿಯೇ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿದನು.” (ಗಲಾ ೨:೨೦)

Leave A Comment

Your Comment
All comments are held for moderation.