Appam, Appam - Kannada

ಮಾರ್ಚ್ 01 – ಒಬ್ಬರನ್ನೊಬ್ಬರು ಪ್ರೀತಿಸಿರಿ!

“ನನಗೆ ಪ್ರವಾದನವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿಧ್ಯೆಯು ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ.” (೧ ಕೊರಿ ೧೩:೨)

ಅನೇಕ ಸಂದೇಶಕರು ಈ ಪ್ರಪಂಚದಲ್ಲಿ ನಂಬಿಕೆಯೇ ಶ್ರೇಷ್ಠವಾದ ಗುಣ ಎಂಬುದಾಗಿ ಬಲವಾಗಿ ಪ್ರತಿಪಾದಿಸುತ್ತಾರೆ. ನಂಬುವವರಿಗೆ ಎಲ್ಲವೂ ಸಾಧ್ಯ ಎಂಬುದಾಗಿ ಬೋಧಿಸುತ್ತಾರೆ. ನಂಬಿಕೆಯ ಮೂಲಕ ಬೆಟ್ಟಗಳನ್ನೂ ಸಹ ಕದಲಿಸಬಹುದು. ಈ ಲೋಕವನ್ನು ನಂಬಿಕೆಯಿಂದ ಮಾತ್ರ ಜಯಿಸುತ್ತೇವೆ ಎಂದು ಪ್ರಚುರಪಡಿಸುತ್ತಾರೆ.

ಹೌದು ನಂಬಿಕೆಯು ತುಂಬಾ ಅಗತ್ಯವಾಗಿದೆ. ಅದೇ ಸಮಯದಲ್ಲಿ ಪ್ರೀತಿಯ ಪ್ರಾಮುಖ್ಯತೆಯನ್ನು ಎಂದಿಗೂ ಮರೆಯಬಾರದು. ಅಪೋಸ್ತಲನಾದ ಪೌಲನು ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯನ್ನು ಜೊತೆ ಜೊತೆಯಾಗಿ ಇರಿಸಿ, ಇವುಗಳಲ್ಲಿ ಶ್ರೇಷ್ಟವಾದದು ಯಾವುದು ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ನನ್ನನ್ನು ಈ ಪ್ರಶ್ನೆಯನ್ನು ಯಾರಾದರೂ ಕೇಳಿದರೆ ನಾನು ಸ್ವಲ್ಪವೂ ತಡಮಾಡದೇ ಪ್ರೀತಿಯೇ ಶ್ರೇಷ್ಠ ಎಂದು ಹೇಳುತ್ತೇನೆ. (೧ ಕೊರಿ ೧೩:೧೩)

ಒಂದು ಸಂದರ್ಭದಲ್ಲಿ ಒಬ್ಬ ವಕೀಲನು ಯೇಸುವಿನ ಬಳಿಗೆ ಬಂದು ಹೀಗೆ ಕೇಳಿದನು, ” ಬೋಧಕನೇ, ಧರ್ಮಶಾಸ್ತ್ರದಲ್ಲಿ ಶ್ರೇಷ್ಠವಾದ ಆಜ್ಞೆ ಯಾವುದು? ಆ ಕಾಲದಲ್ಲಿ ಇಸ್ರಾಯೇಲ್ಯರು ಮಾತ್ರ ೧೦ ಆಜ್ಞೆಗಳನ್ನು ಹೊಂದಿರಲಿಲ್ಲ, ಯೆಹೂದ್ಯ ರಬ್ಬಿಗಳು ಸುಮಾರು ೩೬೦೦ ನಿಯಮಗಳನ್ನು ಸಿದ್ಧಮಾಡಿ ಅವುಗಳನ್ನು ಅನುಸರಿಸುತ್ತಿದ್ದರು. ಈ ನಿಯಮಗಳು ಯೆಹೂದ್ಯರ ಪವಿತ್ರ ಗ್ರಂಥವಾಗಿರುವ ತಾಲಮುಡ್‌ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

ಆ ಪ್ರಶ್ನೆಗೆ ಯೇಸು ತಕ್ಷಣವೇ ಉತ್ತರಿಸಿ ಹೇಳಿದ್ದೇನಂದರೆ, “ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು.” “ನಿನ್ನ ನೆರೆಹೊರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾ ೨೨:೩೭, ೩೯). ಆತನು ಮತ್ತೇ ಹೇಳಿದ್ದೆನಂದರೆ, ” ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.” (ಮತ್ತಾ ೨೨:೪೦)

ಕ್ರಿಸ್ತನು ನಮ್ಮನ್ನು ವ್ಯಕ್ತಿಗತವಾಗಿ ಮಾತ್ರ ಪ್ರೀತಿ ಮಾಡದೇ ಇಡೀ ಸಭೆಯನ್ನೂ ಸಹ ಪ್ರೀತಿಮಾಡಿದ್ದಾನೆ ಎಂದು ಎಫೆಸ ೫:೨೫ರಲ್ಲಿ ಓದುತ್ತೇವೆ. ಸಭೆಯು ವಿಮೋಚಿಸಲ್ಪಟ್ಟ ದೇವರ ಜನರ ಅನ್ಯೋನ್ಯತೆಯ ಸ್ಥಳವಾಗಿದೆ. ಯೇಸು ಕ್ರಿಸ್ತನು ಸಭೆಯನ್ನು ತನ್ನ ಅಮೂಲ್ಯವಾದ ರಕ್ತವನ್ನು ಕ್ರಯವಾಗಿ ಕೊಟ್ಟು ಕೊಂಡುಕೊಂಡಿದ್ದಾನೆ (ಅ.ಕೃ ೨೦:೨೮). ಮೊದಲಿಂಗನು ಮೊದಲಗಿತ್ತಿಯನ್ನು ಪ್ರೀತಿಸುವ ಪ್ರಕಾರ ಯೇಸುಕ್ರಿಸ್ತನು ಸಭೆಯನ್ನು ಪ್ರೀತಿಸುತ್ತಾನೆ. ಕರ್ತನು ಅನ್ಯಜನರಿಗೆ ತನ್ನ ದೈವೀಕ ಪ್ರೀತಿಯನ್ನು ಸಭೆಯ ಮೂಲಕ ಪ್ರಕಟಪಡಿಸಲು ಬಯಕೆಯುಳ್ಳವನಾಗಿದ್ದಾನೆ.

ಒಮ್ಮೆ ನಾನು ಒಂದು ಪ್ರಾರ್ಥನೆಯನ್ನು ಕ್ರೈಸ್ತೀಯ ಮಾಸಪತ್ರಿಕೆಯಲ್ಲಿ ಓದಿದೆನು: ” ಓ ಪ್ರೀತಿಯುಳ್ಳ ದೇವರೇ! ನೀನು ಎಷ್ಟು ಶ್ರೇಷ್ಠವಾಗಿ ನಮ್ಮನ್ನು ಪ್ರೀತಿಸಿದ್ದಿರಿ, ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ನಮಗೆ ಕಲಿಸಿದ್ದೀರಿ. ಆದರೂ ನಿನ್ನ ಮಕ್ಕಳಾದ ನಾವು ಪ್ರೀತಿಯ ಬದಲಾಗಿ ದ್ವೇಷ ಮತ್ತು ವೈಮನಸ್ಸನ್ನು, ಮಮತೆಯ ಬದಲಾಗಿ ವಿಭಾಗಗಳು, ಒಪ್ಪಿಸಿಕೊಡುವಿಕೆಗೆ ಬದಲಾಗಿ ಹಠಮಾರಿತನ, ಕರುಣೆಯ ಬದಲು ಅಸೂಯೆ ಮತ್ತು ಕಿರಿಕಿರಿಯನ್ನು ಆರಿಸಿಕೊಂಡೆವು. ಓ ದೇವರೇ, ಈ ಪರಿಸ್ಥಿತಿಯನ್ನು ಬದಲಾಯಿಸಿರಿ. ನಿನ್ನ ಮಹಿಮೆಯ ಪ್ರೀತಿಯಿಂದ ನಮ್ಮನ್ನು ತುಂಬಿರಿ. ನಿಮ್ಮಿಂದ ನಮ್ಮನ್ನು ಎಂದಿಗೂ ಬಿಡಿಸಲಾರದ ಪ್ರೀತಿಯೆಂಬ ಬಂಧದಿಂದ ನಮ್ಮನ್ನು ಕಟ್ಟಿರಿ ಮತ್ತು ನಮ್ಮನ್ನು ಕರ್ತನ ಸಮೀಪಕ್ಕೆ ನಡೆಸಿರಿ.”

ಪ್ರಿಯ ದೇವರ ಮಕ್ಕಳೇ, ಎಂತಹ ಸುಂದರವಾದ ಪ್ರಾರ್ಥನೆಯಲ್ಲವೇ!

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ನೀವು ಪೂರ್ಣ ವಿನಯ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ.” (ಎಫೆ ೪:೨-೩)

Leave A Comment

Your Comment
All comments are held for moderation.