No products in the cart.
ಜನವರಿ 10 – ಆಶೀರ್ವದಿಸಲ್ಪಟ್ಟ ಉದ್ಯೋಗ!
“ನೋಹನು ವ್ಯವಸಾಯಗಾರನಾಗಿದ್ದನು; ಅವನೇ ದ್ರಾಕ್ಷೇತೋಟವನ್ನು ಪ್ರಾರಂಭಿಸಿದನು.” (ಆದಿ ೯:೨೦)
ನೋಹನ ಜೀವನ ನಿಜಕ್ಕೂ ಆಶೀರ್ವದಿಸಲ್ಪಟ್ಟ ಜೀವನವಾಗಿತ್ತು. ಆತನು ನೀತಿವಂತನು. ಯಥಾರ್ಥವಂತನು ಮತ್ತು ದೇವರೊಂದಿಗೆ ನಡೆಯುವವನೂ ಆಗಿದ್ದನು. ದೇವರು ಆತನೊಂದಿಗೆ ಮತ್ತು ಅವನ ಕುಟುಂಬದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು ಹಾಗೂ ಕರ್ತನು ನೋಹನನ್ನು ಮತ್ತು ಅವನ ಸಂತತಿಯನ್ನು ಆಶೀರ್ವದಿಸಿದನು.
ನೋಹನು ತನ್ನ ಜೀವಿತ ಕಾಲದಲ್ಲಿ ಮೂರು ಪ್ರಮುಖವಾದ ಕೆಲಸಗಳನ್ನು ಮಾಡಿದನು ಎಂದು ಸತ್ಯವೇದವು ತಿಳಿಸುತ್ತದೆ:
೧. ಆತನು ನಾವೆಯನ್ನು ಕಟ್ಟಿದನು: ನಾವೆಯನ್ನು ಕಟ್ಟುವುದು ಸುಲಭದ ಕಾರ್ಯವಾಗಿರಲಿಲ್ಲ. ಅದರ ಅಳತೆಯು ಹೀಗೆ ಇತ್ತು, ಮುನ್ನೂರು ಮೊಳ ಉದ್ದ, ಐವತ್ತು ಮೊಳ ಅಗಲ ಮತ್ತು ಮುವತ್ತು ಮೊಳ ಎತ್ತರ ಹೊಂದಿರುವ ಒಂದು ಅತ್ಯದ್ಭುತ ಆಕಾರವಾಗಿತ್ತು. ಕ್ರಿ, ಶ ೧೮೫೦ ರ ವರೆಗೂ ಇಡೀ ಪ್ರಪಂಚದಲ್ಲಿ ಇಷ್ಟು ದೊಡ್ಡ ಗಾತ್ರದ ಹಡಗನ್ನು ಯಾರೂ ನಿರ್ಮಿಸಲಿಲ್ಲ.
ನೋಹನು ನಾವೆಯ ಕೆಲಸವನ್ನು ಮಾಡುತ್ತಿದ್ದಾಗ ಮಳೆಯ ಸೂಚನೆಯಾಗಲಿ ಅಥವಾ ಜಲಪ್ರಲಯವಾಗಲಿ ಇರಲಿಲ್ಲ. ಆ ಕಾಲದ ಜನರು ಅವನ ಮಾತುಗಳನ್ನು ನಂಬುತ್ತಿರಲಿಲ್ಲ. ಅವರು ನೋಹನನ್ನು ಹಿಯಾಳಿಸಿದರು. “ನೀನು ಒಣನೆಲದಲ್ಲಿ ಏಕೆ ಹಡಗನ್ನು ಕಟ್ಟುತ್ತೀ, ಸಮುದ್ರದ ದಡದಲ್ಲಿ ಕಟ್ಟಬಹುದಲ್ಲಾ?, ಅಂದರು. ಅದರೂ ನೋಹನು ತನ್ನ ಕೆಲಸವನ್ನು ನಿಲ್ಲಿಸಲಿಲ್ಲ. ಎಲ್ಲಾ ತಡೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡು ದೇವರು ಆಜ್ಞಾಪಿಸಿದನ್ನು ಮಾಡಿ ಮುಗಿಸಿದನು.
೨. ಆತನು ದೇವರ ವಾಕ್ಯಗಳನ್ನು ಸಾರಿದನು: ನೋಹನು “ನೀತಿಯನ್ನು ಪ್ರಸಂಗಿಸುವವನು” ಎಂಬ ಹೆಸರನ್ನು ಹೊಂದಿದನು. (೧ ಪೇತ್ರ ೨:೫). ಎಷ್ಟು ಕಾಲಾವಧಿ ಅವನು ಪ್ರಸಂಗಿಸಿದನು ಎಂಬ ನಿಕರ ಮಾಹಿತಿ ಇಲ್ಲ. ಆದರೆ ಅನೇಕ ತತ್ವಜ್ಞಾನಿಗಳ ಪ್ರಕಾರ ಆದಿಕಾಂಡ ೬:೩ ರ ಪ್ರಕಾರ ಸುಮಾರು ೧೨೦ ವರ್ಷಗಳು ಪ್ರಸಂಗಿದರು.
ಏನೇ ಇರಲಿ ಸುಮಾರು ೧೦೦ ವರ್ಷಗಳು ಪ್ರಸಂಗಿಸಿದನು ಎಂಬುದನ್ನು ಅನೇಕರು ಸಲಹೆ ನೀಡಿದ್ದಾರೆ. ನೋಹನು ೫೦೦ ವರ್ಷದವನಾಗಿದ್ದಾಗ ಅವನಿಗೆ ಶೇಮನು, ಹಾಮನು ಮತ್ತು ಯಫೇತನು ಜನಿಸಿದರು. ನೋಹನು ೬೦೦ ವರ್ಷದವನಾಗಿರುವಾಗ ಜಲಪ್ರಳಯ ಭೂಮಿಯ ಮೇಲೆ ಬಂದಿತು. (ಆದಿ ೭:೧೧). ಆದುದರಿಂದ ನೋಹನು ಒಂದು ಶತಮಾನ ನೀತಿಯ ಕುರಿತು ಪ್ರಸಂಗಿಸಿದನು, ಆದರೂ ಒಬ್ಬರೂ ಪ್ರತಿಕ್ರಿಯೆ ನೀಡಲಿಲ್ಲ.
ಜಲಪ್ರಳಯದ ನಂತರ ನೋಹನು ನಾವೆಯನ್ನು ಕಟ್ಟುವ ಅವಶ್ಯಕತೆ ಇರಲಿಲ್ಲ. ಆತನು ಹಿಂದೆ ಪ್ರಸಂಗಿಸಿದಂತೆ ಪ್ರಸಂಗಿಸಲಿಲ್ಲ. ಬದಲಿಗೆ ಆತನು ನೂತನವಾದ ಕೆಲಸವನ್ನು ಪ್ರಾರಂಭಿಸಿದನು – ಸುಂದರವಾದ ಒಂದು ದ್ರಾಕ್ಷೇತೋಟವನ್ನು ನಿರ್ಮಿಸಿದನು.
೩. ಆತನು ದ್ರಾಕ್ಷೇತೋಟವನ್ನು ನಿರ್ಮಿಸಿದನು: ಇಸ್ರಾಯೇಲ್ಯರಿಗೆ ದ್ರಾಕ್ಷೇತೋಟವು ಆಶೀರ್ವಾದಕ್ಕೆ ಗುರುತಾಗಿದೆ. ಒಲೀವ ಮರಗಳು ಆಶೀರ್ವಾದಕ್ಕೆ ಸಂಕೇತವಾಗಿರುವಂತೆ, ಅಂಜೂರ ಮರವು ಸಾಮಾಜೀಕ ಜೀವನಕ್ಕೆ ಹೋಲಿಕೆಯಾಗುವಂತೆಯೇ ದ್ರಾಕ್ಷೇ ತೋಟವು ಕುಟುಂಬದ ಆಶೀರ್ವಾದ ಮತ್ತು ಫಲಭರಿತ ಜೀವಿತಕ್ಕೆ ಸಂಕೇತವಾಗಿದೆ.
ಪ್ರಿಯ ದೇವರ ಮಕ್ಕಳೇ, ದೇವರು ನಿಮಗೆ ಏನೇ ಕೆಲಸ ನೀಡಿದ್ದರೂ ಅದನ್ನು ನಂಬಿಗಸ್ತರಾಗಿ, ಯಥಾರ್ಥವಂತರಾಗಿ ಮತ್ತು ಪ್ರಮಾಣಿಕವಾಗಿ ಮಾಡಿರಿ. ದೇವರು ತಾನೇ ನಿಮ್ಮನ್ನು ಆಶೀರ್ವದಿಸಿ ಉನ್ನತವಾದ ಸ್ಥಾನಕ್ಕೆ ನಡೆಸಲಿ.
ಕರ್ತನಾದ ಯೇಸುಕ್ರಿಸ್ತನು ಹೀಗೆ ಹೇಳಿದ್ದಾರೆ ” ಅವನ ದಣಿಯು – ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಸೌಭಾಗ್ಯದಲ್ಲಿ ಸೇರು ಅಂದನು” (ಮತ್ತಾ ೨೫:೨೧), “ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ; ನೀನು ಧನ್ಯನು, ನಿನಗೆ ಶುಭವಿರುವದು.” (ಕೀರ್ತ ೧೨೮:೨)
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಅಂತಃಪುರದಲ್ಲಿರುವ ನಿನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇಮರದ ಸಸಿಗಂತಿರುವರು.” (ಕೀರ್ತ ೧೨೮:೩)
